ನಾಗಲಿಂಗ
ಲೆಸಿತಿಡೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ವೃಕ್ಷ. ಕುರೂಪಿಟಾ ಗೈಯಾನೆನ್ಸಿಸ್ ಇದರ ಶಾಸ್ತ್ರೀಯ ನಾಮ. ಇಂಗ್ಲಿಷ್ ಹೆಸರು ಕ್ಯಾನನ್ ಬಾಲ್ ಟ್ರಿ. ಇದು ಗಯಾನದ ಮೂಲನಿವಾಸಿ. ಭಾರತ, ದಕ್ಷಿಣ ಅಮೆರಿಕ ಮತ್ತು ವೆಸ್ಟ್ ಇಂಡೀಸ್‍ಗಳಲ್ಲಿ ಹೇರಳವಾಗಿ ಕಾಣದೊರೆಯುತ್ತದೆ. ಇದು 12-18 ಮೀ. ಎತ್ತರಕ್ಕೆ ಬೆಳೆಯುವ ಮಧ್ಯಮ ಗಾತ್ರದ ನಿತ್ಯಹಸುರಿನ ಮರ. ಇದರಲ್ಲಿ ಸಂಯುಕ್ತ ಮಾದರಿಯ ಎಲೆಗಳುಂಟು. 

ಹೂಗಳು ಮೂಲಕಾಂಡ ಮತ್ತು ಬಲಿತ ರೆಂಬೆಗಳ ಮೇಲೆ ಮೂಡುವುವು. ಅವುಗಳ ಬಣ್ಣ ಗುಲಾಬಿ ಮಿಶ್ರಿತ ಬಿಳಿಹಳದಿ ಅಥವಾ ನೇರಳೆಗೆಂಪು. ಹೂಬಿಡುವ ಕಾಲ ಏಪ್ರಿಲ್-ಸೆಪ್ಟೆಂಬರ್ ಅವಧಿ. ಪುಷ್ಪದಳಗಳು ಗುಲಾಬಿ ದಳಗಳಂತೆ ಒಳಕ್ಕೆ ಬಾಗಿಕೊಂಡಿವೆ. ಕೇಸರಗಳೆಲ್ಲ ಒಗ್ಗೂಡಿ ನಾಗರಹಾವಿನ ಹೆಡೆಯ ರೂಪದಲ್ಲಿ ಶಲಾಕೆಯ ಮೇಲೆ ಬಾಗಿವೆ. ಎಂದೇ ಇದಕ್ಕೆ ನಾಗಲಿಂಗ ಎಂಬ ಹೆಸರು ಬಂದಿದೆ. ಕಾಯಿಗಳು ಚಕ್ಕೋತ ಹಣ್ಣಿನ ಗಾತ್ರಕ್ಕಿವೆ. ಇವುಗಳ ಬಣ್ಣ ಚಾಕಲೇಟು ಅಥವಾ ಕಂದು. ಕಾಯಿಯ ಸಿಪ್ಪೆ ಬಲುದಪ್ಪ. ತಿರುಳು ಹುರುಳಿವಾಸನೆಯಿಂದ ಕೂಡಿದೆ. ಒಳಗೆ ಅನೇಕ ಬೀಜಗಳುಂಟು. ಹಣ್ಣು 8 ರಿಂದ 9 ತಿಂಗಳುಗಳ ಅನಂತರ ಮಾಗುತ್ತದೆ. ನಾಗಲಿಂಗವನ್ನು ಬೀಜಗಳಿಂದ ವೃದ್ಧಿಸುವುದಿದೆ. ಕೆಲವೆಡೆ ಹಣ್ಣಿನ ತಿರುಳನ್ನು ತಿನ್ನುವುದುಂಟು. ಹೂವನ್ನು ಪೂಜೆಪುನಸ್ಕಾರಗಳಲ್ಲೂ ಮುಡಿಯಲೂ ಉಪಯೋಗಿಸುವುದಿದೆ.						
			(ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ